ಶನಿವಾರ, ಜನವರಿ 2, 2016

ಬೆಣ್ಣೆ ಕದ್ದನಮ್ಮ ಕೃಷ್ಣ ...

ಬೆಣ್ಣೆ ಕದ್ದನಮ್ಮ ಕೃಷ್ಣ 
ಬೆಣ್ಣೆ ಕದ್ದನಮ್ಮ
ಬೆಣ್ಣೆ ಕದ್ದು  ಜಾರುತ ಬಿದ್ದು ಮೊಣಕಾಲೂದಿಸಿಕೊಂಡನಮ್ಮ
ಬಿಂದಿಗೆ ಬಿದ್ದು
ಸಿಡಿಯಲು ಸದ್ದು
ಬೆಚ್ಚಿದ ಗೋಪಿಯ ಕಂದನಮ್ಮ

ತಾಯಿ ಬಂದಳೋಡಿ
ಕಳ್ಳನ ಕಣ್ಣಿನಲ್ಲಿ ಕೋಡಿ
ಕಣ್ಣಲಿ ತಾಯಿ ಸಿಟ್ಟನು ತಳೆದು
ಸೊಂಟಕೆ ಕೈಯಿಟ್ಟು
ಆದಳು ಅರೆಕ್ಷಣ
ಭೀಕರ ಕಾಳಿ
ದುರುದುರು ಕಣ್ಬಿಟ್ಟು

ಹಣೆ ತುಟಿ ಕೆನ್ನೆಗೆ
ಬೆಣ್ಣೆ ಮೆತ್ತಿದ ಒರಟನ ನೋಟಕ್ಕೆ
ಇಳಿಯಿತು ಕೋಪ
ಅರಳಿತು ಕೆಂದುಟಿ
ತುಂಟನಆಟಕ್ಕೆ

ತಪ್ಪಿದ ದಂಡಕೆ
ನಿಟ್ಟುಸಿರೆಳೆದ ಬೆಣ್ಣೆಗಳ್ಳ ನೀಲ
ತಟ್ಟನೆ ಅಳುವುದ  ನಿಲ್ಲಿಸಿ ನಕ್ಕ
ಬಾಯಗಲಿಸಿ ಬಾಲ
ಅರಳಿದ ಬೆಳದಿಂಗಳ ಜಾಲ

ಅವನ ಅಕುಟಿಲ
ಬೆಣ್ಣೆಯಂತ ನಗು
ಕಾಯಲಿ ಜಗದವರ
ಸಂತತ ನಗಿಸಲಿ ನಗದವರ

- ಪ್ರೊ. ಕೆ.ಎಸ್. ನಿಸಾರ್ ಅಹಮದ್
ಸಂಗೀತ: ಮೈಸೂರು ಅನಂತಸ್ವಾಮಿ
ಗಾಯನ: ಸಮೂಹ ಗಾನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ